ಭಾರತದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರದಿಂದ ಪೂರ್ವಕ್ಕೆ 15 ಕಿ.ಮೀ. ದೂರದಲ್ಲಿರುವ ಒಂದು ಐತಿಹಾಸಿಕ ಸ್ಥಳ. ವಿಜಯನಗರಕಾಲೀನ ವೀರಭದ್ರೇಶ್ವರ ದೇಗುಲದ ಶಿಲ್ಪವೈಭವ ಮತ್ತು ವರ್ಣಚಿತ್ರ ಸೌಂದರ್ಯಗಳಿಗೆ ಪ್ರಸಿದ್ಧವಾಗಿದೆ. ಈ ಊರಿನ ಹೆಸರಿನ ಬಗೆಗೆ ಕೆಲವು ದಂತಕಥೆಗಳಿವೆ. ಸೀತೆಯನ್ನು ಅಪಹರಿಸಿ ಆಕಾಶಮಾರ್ಗದಲ್ಲಿ ಸಾಗುತ್ತಿದ್ದ ರಾವಣನನ್ನು ಜಟಾಯು ಈ ಸ್ಥಳದಲ್ಲಿ ಎದುರಿಸಿದಾಗ, ರಾವಣ ‘ಲೇ ಪಕ್ಷಿ’ ಎಂದು ಸಂಬೋಧಿಸಿದುದರಿಂದ ಅದೇ ಕಾಲಕ್ರಮೇಣ ಲೇಪಾಕ್ಷಿ ಎಂಬ ರೂಪ ತಳೆಯಿತಂತೆ. ವಿಜಯನಗರದ ಅರಸ ಕೃಷ್ಣದೇವರಾಯನ ಕಾಲದಲ್ಲಿ ಅವನ ಅಧಿಕಾರಿ ವಿರುಪಣ್ಣ ಎಂಬಾತ ಬೊಕ್ಕಸದ ಹಣವನ್ನು ಬಳಸಿಕೊಂಡು ಇಲ್ಲಿಯ ದೇವಾಲಯದ ನಿರ್ಮಾಣಕಾರ್ಯ ಕೈಗೊಂಡನೆಂದೂ ಈ ಸಂಗತಿ ಅರಸನಿಗೆ ತಿಳಿದಾಗ ಕೋಪಬಂದ ಅರಸ ವಿರುಪಣ್ಣನ ಕಣ್ಣು ಕೀಳಿಸಲು ಆಜ್ಞೆ ಮಾಡಿದನೆಂದೂ ಕಲ್ಯಾಣಮಂಟಪದ ಕಾರ್ಯ ಇನ್ನೂ ಪೂರ್ಣ ಗೊಂಡಿರಲಿಲ್ಲವಾಗಿ ವಿರುಪಣ್ಣನೇ ತನ್ನ ಕಣ್ಣುಗಳನ್ನು ಕಿತ್ತುಕೊಂಡನೆಂದೂ ಇದರಿಂದಾಗಿ ಈ ಸ್ಥಳಕ್ಕೆ ಲೇಪ-ಅಕ್ಷಿ (ಕುರುಡನಗ್ರಾಮ) ಎಂಬ ಹೆಸರು ಬಂದಿತೆಂದೂ ಪ್ರತೀತಿ. ಈಗಲೂ ಬಂಡೆಯಲ್ಲಿಯ ಎರಡು ಗುಳಿಗಳನ್ನು ತೋರಿಸಿ ಅವು ವಿರುಪಣ್ಣ ಕಿತ್ತುಹಾಕಿದ ಕಣ್ಣುಗಳನ್ನು ಪ್ರತಿನಿಧಿಸುತ್ತವೆಂದು ಹೇಳುವುದುಂಟು. ಇಲ್ಲಿಯ ಶಿಲ್ಪಿಯ ಅದ್ಭುತ ಸೃಷ್ಟಿಗೆ ಆತನ ತಾಯಿಯೇ ‘ದೃಷ್ಟಿ’ ಹಾಕಿದುದರಿಂದ ಕೋಪಗೊಂಡ ಶಿಲ್ಪಿ ಆಕೆಯ ಕಣ್ಣನ್ನು ಕಿತ್ತುಹಾಕಿದನೆಂಬ ಇನ್ನೊಂದು ಕಥೆಯೂ ಈ ಗುಳಿಗಳಿಗೆ ಸಂಬಂಧಿಸಿದಂತೆ ಪ್ರಚಲಿತವಿದೆ. ಗ್ರಾಮದೇವತೆಯಿಂದಾಗಿ ಈ ಸ್ಥಳಕ್ಕೆ ಲೇಪಾಕ್ಷಿ ಎಂಬ ಹೆಸರು ಬಂದಿರಬಹುದೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ‘ಲೇಪಾಕ್ಷಾಂ ಪಾಪನಾಶನಃ ಎಂದು ತಿಳಿಸಿರುವ ಸ್ಕಾಂದ ಪುರಾಣದ ಪ್ರಕಾರ ಈ ಸ್ಥಳ ಪ್ರಮುಖವಾದ ನೂರೆಂಟು ಶೈವಕ್ಷೇತ್ರಗಳಲ್ಲೊಂದು. ‘ಲೇಪಾಕ್ಷಿ ನೋಡದ್ದು ಪಾಪಾಕ್ಷಿ’ ಎನ್ನುವುದು ಶಿವಭಕ್ತರ ನಂಬಿಕೆ.

ಗ್ರಾಮದ ದಕ್ಷಿಣಕ್ಕೆ ಕೂರ್ಮಶೈಲ ಎಂಬ ಗುಡ್ಡದ ಮೇಲಿರುವ ವೀರಭದ್ರೇಶ್ವರ ದೇಗುಲವನ್ನು ಅಕ್ಕಿಸೆಟ್ಟಿ ಮತ್ತು ಮುದ್ದಮಾಂಬಿಕೆಯರ ಮಗ ಪೆನುಗೊಂಡೆಯ ಮಂಡಲಾಧಿಕಾರಿಯಾಗಿದ್ದ ವಿರುಪಣ್ಣ 1538ರಲ್ಲಿ ಕಟ್ಟಿಸಿದನೆಂದು ಶಾಸನದಿಂದ ತಿಳಿದುಬರುತ್ತದೆ. ಆದರೆ ಮೂಲ ದೇಗುಲ ಪ್ರಾಚೀನವಾದುದಾದರೂ ಈಗಿನ ರಚನೆ ವಿರುಪಣ್ಣನ ಕಾಲದ್ದೆಂದು ಕೆಲವರ ಅಭಿಪ್ರಾಯ. ವೀರಭದ್ರ ದೇವಾಲಯ ಮೂರು ಗುಡಿಗಳಿಂದ ಕೂಡಿದ್ದು ಮೇಲ್ನೋಟಕ್ಕೆ ಹೊಯ್ಸಳ ರಚನಾ ಶೈಲಿಯನ್ನು ಹೋಲುತ್ತದೆ. ಮಧ್ಯದ ಗುಡಿಯಲ್ಲಿ ಆರಡಿ ಎತ್ತರದ ಚತುರ್ಭುಜ ವೀರಭದ್ರಮೂರ್ತಿ ಇದೆ. ಇನ್ನೆರಡು ಗುಡಿಗಳಲ್ಲಿ ಶಿವ ಹಾಗೂ ರಘುನಾಥ ಮೂರ್ತಿಗಳಿವೆ. ಮೂರು ಗುಡಿಗಳಿಗೂ ಸೇರಿದಂತೆ ಒಂದೇ ನವರಂಗಮಂಟಪವಿದೆ. ದೇಗುಲದ ಎಲ್ಲ ಪಾಶ್ರ್ವಗಳಿಗೂ ಹೊರಪ್ರಾಕಾರವಿದೆ. ಮುಖ್ಯ ಭಾಗಗಳನ್ನು ಒಳಗೊಂಡಂತೆ ಒಳಪ್ರಕಾರ ಸಹ ಇದೆ. ನಾಟ್ಯ ಮಂಟಪದ ಸ್ತಂಭಗಳು ತೇಜಸ್ಸು ಓಜಸ್ಸುಗಳಿಂದ ಭರಿತವಾದ ಗಾಯಕ-ನರ್ತಕಾದಿ ಶಿಲ್ಪಗಳಿಂದ ಕೂಡಿದ್ದು ಮನೋಹರವಾಗಿವೆ. ಹಾಗೆಯೇ ಕಲ್ಯಾಣಮಂಟಪ ಸಹ; ಆದರೆ ಇದು ಅಪೂರ್ಣವಾಗಿದೆ. ಇಲ್ಲಿಯ ಸ್ತಂಭಶಿಲ್ಪಗಳು ಪ್ರಕೃತಿ ಪ್ರಕೋಪಕ್ಕೆ ಸಿಲುಕಿ ನಲುಗಿವೆ.
 
ನಾಟ್ಯಮಂಟಪ ಮತ್ತು ಕಲ್ಯಾಣಮಂಟಪದ ಶಿಲ್ಪ ಹಾಗೂ ವರ್ಣಚಿತ್ರಗಳ ವೈಭವ-ಸೌಂದರ್ಯ ಕಲಾಸಕ್ತರಿಗೆ ರಸದೂಟವೆನಿಸುತ್ತದೆ. ಪುರಾಣ, ಮಹಾಕಾವ್ಯಗಳಿಗೆ ಸಂಬಂಧಿಸಿದ ಸನ್ನಿವೇಶಗಳ ಮನೋಜ್ಞ ಚಿತ್ರಣ ಇಲ್ಲಿದೆ. ಬ್ರಹ್ಮ, ದತ್ತಾತ್ರೇಯ, ನಾರದ, ರಂಭೆ, ಶಿವಲೀಲಾಮೂರ್ತಿಗಳು, ಅಷ್ಟದಿಕ್ಪಾಲಕರು, ಸಪ್ತರ್ಷಿಗಳು ಮುಂತಾದ ಅನೇಕ ಶಿಲ್ಪಗಳು ಸೊಬಗಿನಿಂದ ಕೂಡಿವೆ. ಇಲ್ಲಿ ಬಿಡಿಸಿರುವ ಸಂಗೀತ ವಾದ್ಯಗಳು, ವೇಷಭೂಷಣ ವಿನ್ಯಾಸಗಳು, ಶಿಲ್ಪಭಂಗಿಗಳು ಕಣ್ಸೆಳೆಯುತ್ತವೆ. ದೇವಾಲಯದ ಹೊರಗೋಡೆಯ ಉಬ್ಬುಶಿಲ್ಪಗಳಲ್ಲಿ ಶಿವಭಕ್ತ ಸಿರಿಯಾಳ, ಕಿರಾತಾರ್ಜುನೀಯ ಮುಂತಾದ ಕಥೆಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಬಿಡಿಸಿದೆ. ಕೆಲವು ಶಿಲ್ಪಗಳು ಸ್ವೋಪಜ್ಞ ಪರಿಕಲ್ಪನೆಯಿಂದ ಬೆರಗುಂಟು ಮಾಡುತ್ತವೆ.

ಗರ್ಭಗೃಹದ ಗೋಡೆ, ರಂಗಮಂಟಪ ಮತ್ತು ಮುಖಮಂಟಪಗಳ ಚಾವಣಿಗಳಲ್ಲಿ ವಿಜಯನಗರ ಶೈಲಿಯ ಭಿತ್ತಿಚಿತ್ರಗಳ ಉತ್ತಮ ಉದಾಹರಣೆಗಳನ್ನು ಕಾಣಬಹುದು. ಶಿವಪಾರ್ವತಿ ಕಲ್ಯಾಣ, ದಕ್ಷಿಣಾಮೂರ್ತಿ, ಶ್ರೀರಾಮ, ವಟಪತ್ರಶಾಯಿ ಮುಂತಾದವು ಗಮನಾರ್ಹ. ಹಾಗೆಯೇ ಅರ್ಧಮಂಟಪದಲ್ಲಿನ ಮಾರ್ಕಂಡೇಯ, ನಟರಾಜ, ದಕ್ಷಿಣಾಮೂರ್ತಿ, ಹರಿಹರ ಮೊದಲಾದ ಶಿಲ್ಪಗಳು ಸುಂದರವಾಗಿವೆ. ಗಮನಿಸಬೇಕಾದ ಇನ್ನೊಂದು ಶಿಲ್ಪ ಭಿಕ್ಷಾಟನ ಮೂರ್ತಿಯದು. ಈಶ್ವರನ ಭಾವ ಭಂಗಿ ಗಾಂಭೀರ್ಯದಿಂದ ಕೂಡಿದ್ದರೆ, ಮುಂದೆ ಸಾಗುತ್ತಿರುವ ಶಿವಗಣದ ಭಂಗಿ ವಿಚಿತ್ರವೂ ವಿನೋದಮಯವೂ ಆಗಿದೆ. ಭಿಕ್ಷೆ ನೀಡುತ್ತಿರುವ ಋಷಿಪತ್ನಿಯರ ಮುಖಗಳಲ್ಲಿ ಪ್ರೀತಿವಾತ್ಸಲ್ಯ ಹಾಗೂ ಭಕ್ತಿಭಾವಗಳ ಸಂಗಮವಿದೆ. ಚಲನೆ ಮತ್ತು ವಿಶ್ರಾಂತಿ, ಕೋಪ ಮತ್ತು ಶಾಂತಭಾವಗಳ ಮಧುರ ಬೆಸುಗೆಯನ್ನು ಅಭಿವ್ಯಕ್ತಿಸುವ ಗೌರಿಪ್ರಸಾದಕ ಇನ್ನೊಂದು ಗಮನಾರ್ಹ ಚಿತ್ರ. ಮುಖಮಂಟಪದಲ್ಲಿ ಚಿತ್ರಿಸಿರುವ ಮನುಚೋಳ, ಅರ್ಧಮಂಟಪದಲ್ಲಿಯ ಅಂಧಕಾಸುರ ಸಂಹಾರಿ, ನಟರಾಜ ಮುಂತಾದವು ಹೃದ್ಯವೆನಿಸುತ್ತವೆ. ದೇವಾಲಯ ಕಟ್ಟಿಸಿದ ವಿರುಪಣ್ಣ ಹಾಗೂ ಆತನ ಸೋದರ ವೀರಣ್ಣನ ವರ್ಣಚಿತ್ರ, ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ದೃಶ್ಯಗಳ ಚಿತ್ರಣ ಕೂಡ ಗಮನಾರ್ಹ. 

ಮುಖ್ಯ ಗುಡಿಯ ದಕ್ಷಿಣಕ್ಕಿರುವ ಬೃಹತ್ ನಾಗಲಿಂಗಮೂರ್ತಿ ಮನೋಹರವಾದುದು. ಬೃಹತ್ ಗಣೇಶ ಹಾಗೂ ದುರ್ಗಾ ಮೂರ್ತಿಗಳೂ ಗಮನಾರ್ಹ. ಇಲ್ಲಿರುವ ಬೃಹತ್ ನಂದಿಶಿಲ್ಪ ಉಲ್ಲೇಖನೀಯವಾದುದು. 15 ಅಡಿ ಎತ್ತರ ಹಾಗೂ 22 ಅಡಿ ಉದ್ದವಿರುವ ಈ ಸೊಬಗಿನ ನಂದಿ ಭಾರತದಲ್ಲಿಯೇ ಎತ್ತರದ್ದೆಂದು ಹೇಳಲಾಗಿದೆ. ಈ ಊರಿನಲ್ಲಿ ತಿರುಮಲಸ್ವಾಮಿಯ ದೇಗುಲವೊಂದಿದೆ. ಶಿವರಾತ್ರಿ ಹಾಗೂ ಶೈವಧರ್ಮೀಯ ಉತ್ಸವ ದಿನಗಳಂದು ಇಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.
												
(ಎಚ್.ಎಮ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ